ಗಾಂಧೀ, ಇಂದಿರಾ ಪ್ರಿಯದರ್ಶಿನಿ
1917-1984. ಗಣರಾಜ್ಯ ಭಾರತದ ಪ್ರಧಾನಿ ಎರಡು ಅವಧಿಗೆ(1966-1977 ಮತ್ತು 1980-1984). ಗಾಂಧೀಯುಗದ ಸಂತಾನ. ಮೋತಿಲಾಲ ನೆಹರೂ ಅವರ ಮೊಮ್ಮಗಳು. ಜವಾಹರಲಾಲ ನೆಹರೂ ಅವರ ಪುತ್ರಿ. ತಾಯಿ ಕಮಲಾ ನೆಹರೂ. ಜನನ ಅಲಹಾಬಾದಿನಲ್ಲಿ. 1917ರ ನವೆಂಬರ್ 19ರಂದು ತಾತ ಮೋತಿಲಾಲ್ ನೆಹರೂ ಅಲಹಾಬಾದಿನ ಶ್ರೀಮಂತ, ಪ್ರಖ್ಯಾತ ನ್ಯಾಯವಾದಿ. ತಂದೆ ಜವರಹರ್‍ಲಾಲ್ ನೆಹರು ಕೂಡ ವಿಖ್ಯಾತರು. ಇಬ್ಬರೂ ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ತಮ್ಮ ಶ್ರೀಮಂತ ವಿಲಾಸದ ಜೀವನವನ್ನು ಸರಳಗೊಳಿಸಿ ಸೇವೆಗೆ ಮುಡಿಪಾಗಿಟ್ಟರು. ಅವರ ಅಲಹಾಬಾದಿನ ಶ್ರೀಮಂತ ಗೃಹ ರಾಜಕೀಯ ಚಟುವಟಿಕೆಯ ಕೇಂದ್ರವಾಯಿತು; ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿಯ ಸೆಲೆಯಾಯಿತು. ರಾಜಕೀಯಾವೇಶಗಳ ಆ ಸನ್ನಿವೇಶದಲ್ಲಿ ಇಂದಿರಾ ಪ್ರಿಯದರ್ಶಿನಿ ಬೆಳೆದರು. ಅವರ ತಂದೆಯೂ ತಾತನೂ ಸ್ವೀಕರಿಸಿದ್ದ ಸ್ವಾತಂತ್ರ್ಯ ಹೋರಾಟ ದೀಕ್ಷೆ ದಲಿತರ ಸೇವೆಯ ವ್ರತ ಇಂದಿರಾ ಪ್ರಿಯದರ್ಶಿನಿಯವರ ಎಳೆಯಮನಸ್ಸಿನ ಮೇಲೆ ವಿಶಿಷ್ಟ ಮುದ್ರೆಯನ್ನೊತ್ತಿದುವು. ತಂದೆಯಿಂದ ಅವರು ದೇಶಪ್ರೇಮವನ್ನೂ, ಅಂತರರಾಷ್ಟ್ರೀಯ ದೃಷ್ಟಿಯನ್ನೂ ಪಡೆದುಕೊಂಡರು. ನೆಹರೂ ಅವರು ಕಾರಾಗೃಹದಿಂದ ಮಗಳಿಗೆ ಬರೆದ ಕೆಲವು ಪತ್ರಗಳು ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ತಂದೆಯೇ ಅವರಿಗೆ ಆದರ್ಶ, ಗುರು, ದಾರ್ಶನಿಕ. ಬಾಲಕಿ ಇಂದಿರಾ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ರೀತಿಯಲ್ಲಿ ಭಾಗವಹಿಸಿದರು. ವಾನರ ಸೇನಾ ಮತ್ತು ಚರಖಾ ಸಂಘಗಳನ್ನು ಅವರು ಸಂಘಟಿಸಿದರು. ಆಗ ಅವರಿಗೆ ಕೇವಲ 12 ವರ್ಷ. ಅಲಹಾಬಾದ್, ಸ್ವಿಟ್ಜರ್ಲೆಂಡ್, ಆಕ್ಸ್‍ಫರ್ಡ್, ಶಾಂತಿನಿಕೇತನಗಳಲ್ಲಿ ಅವರು ವಿದ್ಯೆ ಗಳಿಸಿದರು. ಆ ಕಾಲದಲ್ಲೂ ಅವರು ಅನೇಕ ವಿದ್ಯಾರ್ಥಿ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಲಂಡನಿನ ಇಂಡಿಯಾ ಲೀಗಿನ ಚಟುವಟಿಕೆಗಳಲ್ಲಿ ಅವರು ವಹಿಸಿದ, ಪಾತ್ರ ಪ್ರಧಾನವಾದ್ದು. ಅವರು ಕಾಂಗ್ರೆಸಿನ ಸದಸ್ಯೆಯಾದದ್ದು 1938ರಲ್ಲಿ. ಅಂದಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೇರವಾಗಿ ಸೇರಿದಂತಾಯಿತು. ಫಿರೋeóï ಗಾಂಧಿಯವರನ್ನು ಅವರು ವಿವಾಹವಾದ್ದು 1942ರಲ್ಲಿ. `ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಪತಿಯೊಡನೆ ಅವರಿಗೂ ಕಾರಾಗೃಹವಾಸ ಪ್ರಾಪ್ತವಾಯಿತು (1942). ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ಅವರು ದೇಶಸೇವಾಕಾರ್ಯವನ್ನು ಮುಂದುವರಿಸಿದರು. ಶ್ರೀಮತಿ ಇಂದಿರಾಗಾಂಧಿಯವರಿಗೆ 1944ರಲ್ಲಿ ರಾಜೀವ್ ಗಾಂಧಿ ಹಾಗೂ 1946ರಲ್ಲಿ ಸಂಜಯ ಗಾಂಧಿ ಎಂಬ ಇಬ್ಬರು ಮಕ್ಕಳು ಜನಿಸಿದರು. 1947ರಲ್ಲಿ ಅವರು ದೆಹಲಿಯಲ್ಲಿ ಮತೀಯ ಗಲಭೆಗಳಿಗೆ ತುತ್ತಾದ ಪ್ರದೇಶದಲ್ಲಿ ಗಾಂಧಿಯವರ ನೇತೃತ್ವದಲ್ಲಿ ಪರಿಹಾರಕಾರ್ಯ ಕೈಗೊಂಡರು. ಜವಾಹರಲಾಲ ನೆಹರೂ ಅವರು ಪ್ರಧಾನಿಯಾದ ಮೇಲೆ ಇಂದಿರಾ ಗಾಂಧಿಯವರು ಅವರ ಮನೆಯ ಯಜಮಾನಿಯಾಗಿ, ರಾಜಕೀಯದಲ್ಲಿ ಅವರಿಗೆ ಸಹಾಯಕಿಯಾಗಿ, ಅವರ ವಿದೇಶ ಪ್ರವಾಸಗಳಲ್ಲಿ ಸಂಗಾತಿಯಾಗಿ ಇದ್ದರು. ತಾವೇ ಪ್ರತ್ಯೇಕವಾಗಿ ಹಲವು ಆಫ್ರಿಕನ್ ದೇಶಗಳಲ್ಲಿ ಪ್ರವಾಸ ಮಾಡಿದರು. ಇಂದಿರಾ ಗಾಂಧಿಯವರು ರಾಜಕೀಯವನ್ನು ನೇರವಾಗಿ ಪ್ರವೇಶಿಸಿದ್ದು 1955ರಲ್ಲಿ-ಅವರು ಭಾರತ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ನೇಮಕವಾದಾಗ. ಅದೇ ವರ್ಷ ಅವರು ಕಾಂಗ್ರೆಸಿನ ಕೇಂದ್ರ ಚುನಾವಣಾ ಸಮಿತಿಯ ಸದಸ್ಯೆಯೂ ಆದರು. ಮರುವರ್ಷ ಅವರು ಅಲಹಾಬಾದ್ ನಗರ ಕಾಂಗ್ರೆಸಿನ ಅಧ್ಯಕ್ಷೆಯಾದರು. ಸ್ವಲ್ಪ ಕಾಲದಲ್ಲೇ ಅವರಿಗೆ ನೆಹರೂ ಅವರಿಂದ ತೆರವಾದ ಸ್ಥಾನದಲ್ಲಿ ಕೇಂದ್ರ ಸಂಸದೀಯ ಮಂಡಲಿಯ ಸದಸ್ಯತ್ವವೂ ಕಾದಿತ್ತು. 1959ರಲ್ಲಿ ಇಂದಿರಾಗಾಂಧಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ಯು. ಎನ್. ಢೇಬರರಿಂದ ಅಧಿಕಾರ ವಹಿಸಿಕೊಂಡರು. ಕಾಂಗ್ರೆಸಿನ ಅಧ್ಯಕ್ಷತೆ ವಹಿಸಿದ ನೆಹರೂ ವಂಶದವರ ಪೈಕಿ ಅವರು ಮೂರನೆಯವರು. ಆಗ ಅವರಿಗೆ ಇನ್ನೂ 42 ವರ್ಷ. ರಾಷ್ಟ್ರದ ಉನ್ನತ ವಿದ್ಯಮಾನಗಳಲ್ಲಿ ಯುವಜನದ ಪ್ರತೀಕವಾಗಿ ಅವರು ಆಗಮಿಸಿದರೆನ್ನಬಹುದು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಅವರು ಕಿರಿ ವಯಸ್ಸಿನವರನ್ನು ಆರಿಸಿಕೊಂಡರು.

	ಇಂದಿರಾ ಗಾಂಧಿಯವರು ಕಾಂಗ್ರೆಸಿನ ಅಧ್ಯಕ್ಷೆಯಾಗಿದ್ದಾಗ ಕೇರಳ ವಿನಾ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಮಂತ್ರಿಮಂಡಲಗಳಿದ್ದುವು. ಕೇರಳದಲ್ಲಿ ಇ.ಎಂ.ಎಸ್. ನಂಬೂದಿರಿಪಾಡರ ನೇತೃತ್ವದಲ್ಲಿ ಕಮ್ಯೂನಿಸ್ಟ್ ಸರ್ಕಾರವಿತ್ತು. ಈ ಸರ್ಕಾರ ಜಾರಿಗೆ ತರಲು ಆಲೋಚಿಸಿದ್ದ ಶಿಕ್ಷಣ ಸುಧಾರಣಾ ವಿಧೇಯಕದ ವಿರುದ್ಧ ತೀವ್ರ ಚಳವಳಿ ನಡೆಯುತ್ತಿದ್ದ ಕಾರಣ ಆ ಮಂತ್ರಿಮಂಡಲ ವಜಾ ಆದದ್ದು ಇಂದಿರಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾಗ. ಕೇರಳದಲ್ಲಿ ಕಾಂಗ್ರೆಸ್ ನಾಯಕತ್ವ ಮುನ್ನುಗ್ಗುವ ಧೋರಣೆ ಅನುಸರಿಸುವಂತೆ ಮಾಡಿದವರು ಇಂದಿರಾ ಗಾಂಧಿಯವರು. ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ಏರ್ಪಡಿಸಿಕೊಂಡ ಸಂಯುಕ್ತ ರಂಗ ಕೇರಳದ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂತು. ದ್ವಿಭಾಷಾ ರಾಜ್ಯವಾಗಿದ್ದ ಮುಂಬೈಯನ್ನು ಒಡೆದು ಮಹಾರಾಷ್ಟ್ರ, ಗುಜರಾತ್ ರಾಜ್ಯಗಳನ್ನು ರಚಿಸಿದ್ದು ಇಂದಿರಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾಗಲೇ. ಇದರಿಂದ ಮರಾಠಿ ಮತ್ತು ಗುಜರಾತಿ ಭಾಷೆಗಳನ್ನಾಡುವವರ ಆಶೋತ್ತರಗಳು ಈಡೇರಿದಂತಾಯಿತು. ಮರುವರ್ಷ ಎನ್. ಸಂಜೀವರೆಡ್ಡಿಯವರಿಗೆ ಅವರು ಕಾಂಗ್ರೆಸ್ ಅಧ್ಯಕ್ಷತೆಯನ್ನು ವಹಿಸಿಕೊಟ್ಟರು. ಆ ವರ್ಷ ಪತಿ ಫಿರೋeóï ಗಾಂಧಿಯವರು ನಿಧನ ಹೊಂದಿದರು (1960).

	ಪ್ಯಾರಿಸಿನಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಸಾಂಸ್ಕøತಿಕ ಸಂಸ್ಥೆಗೆ (ಯುನೆಸ್ಕೊ) ಭಾರತ ನಿಯೋಗದ ಸದಸ್ಯೆಯಾಗಿ ಅವರು 1960ರಲ್ಲಿ ನೇಮಕಗೊಂಡರು. ಅವರು ನಾಲ್ಕು ವರ್ಷ ಆ ಸಂಸ್ಥೆಗಾಗಿ ಕೆಲಸ ಮಾಡಿದರು; ಅನಂತರ ಅದರ ಕಾರ್ಯನಿರ್ವಾಹಕ ಮಂಡಲಿಯ ಸದಸ್ಯತ್ವವನ್ನೂ ಪಡೆದಿದ್ದರು. 1964ರ ಮೇ ತಿಂಗಳಲ್ಲಿ ನೆಹರೂ ನಿಧನ ಹೊಂದಿದಾಗ ಲಾಲ್ ಬಹಾದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾದರು. ಶಾಸ್ತ್ರಿಯವರ ಸಂಪುಟದಲ್ಲಿ ಇಂದಿರಾ ಗಾಂಧಿಯವರು ಸಮಾಚಾರ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿದ್ದರು. ಉತ್ತರ ಪ್ರದೇಶದ ವಿಧಾನಸಭೆಯಿಂದ ರಾಜ್ಯಸಭೆಗೆ ಇಂದಿರಾ ಗಾಂಧಿಯವರು ಅವಿರೋಧವಾಗಿ ಆಯ್ಕೆಯಾದ್ದು 1964ರ ಆಗಸ್ಟ್ ತಿಂಗಳಿನಲ್ಲಿ. 1966ರ ಜನವರಿಯಲ್ಲಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ತೀರಿಕೊಂಡಾಗ ಇಂದಿರಾ ಗಾಂಧಿಯವರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾದರು. ಆಗ ಅವರ ಪ್ರತಿಸ್ಪರ್ಧಿಯಾಗಿದ್ದವರು ಮೊರಾರ್ಜಿ ದೇಸಾಯಿ. ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿ ಪ್ರತಿಜ್ಞಾವಚನ ಸ್ವೀಕರಿಸಿದ್ದು 1966ರ ಜನವರಿ 24ರಂದು.

	ಆಗ ದೇಶ ತುಂಬ ಕಷ್ಟದ ದಿನಗಳನ್ನು ಎದುರಿಸಬೇಕಾಗಿತ್ತು. ಹಿಂದಿನ ವರ್ಷದ ಪಾಕಿಸ್ತಾನಿ ಆಕ್ರಮಣದಿಂದಾಗಿ ಆರ್ಥಿಕವಾಗಿ ಬಹಳ ನಷ್ಟ ಸಂಭವಿಸಿತ್ತು; ಕೃಷಿ ಕೈಗಾರಿಕೆಗಳ ಯೋಜನಾಬದ್ಧ ಪ್ರಗತಿಗೆ ಅಡಚಣೆ ಉಂಟಾಗಿತ್ತು. ವಿದೇಶೀ ನೆರವು ನಿಂತಿತ್ತು. ಮುಂಗಾರು ಮಳೆ ಬಾರದೆ ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಆಹಾರಾಭಾವ ತಲೆದೋರಿತ್ತು. ಬೆಲೆಗಳು ಏರಿದ್ದುವು. ಜನ ಉದ್ವಿಗ್ನರಾಗಿದ್ದರು. ಪೂರ್ವ ಭಾರತದ ಗಿರಿಜನರು ಬಂಡಾಯ ಎಬ್ಬಿಸಿದ್ದರು. ಅಸ್ಸಾಮಿನಲ್ಲಿ ಪ್ರಕ್ಷುಬ್ಧತೆ ಉಂಟಾಗಿತ್ತು. ಇಂದಿರಾ ಗಾಂಧಿಯವರು ಮಿeóÉೂೀ ಬೆಟ್ಟಗಳ ಪ್ರದೇಶಕ್ಕೆ ಹೋಗಿ ಅಲ್ಲಿಯ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಅನಂತರ ಆ ಜನರಿಗಾಗಿ ಮಿಜೋರಾಂ ಎಂಬ ಪ್ರತ್ಯೇಕ ರಾಜ್ಯ ರಚಿತವಾಯಿತು. ಪಶ್ಚಿಮದಲ್ಲಿ ಪಂಜಾಬ್ ಹರಿಯಾಣ ರಾಜ್ಯಗಳು ರಚನೆಗೊಂಡುವು.

	1966ರಲ್ಲಿ ಇಂದಿರಾ ಗಾಂಧಿಯವರು ವಿದೇಶ ಪ್ರವಾಸ ಕೈಗೊಂಡರು. ಅಮೆರಿಕ ಸಂಯುಕ್ತಸಂಸ್ಥಾನ, ಲಂಡನ್, ಮಾಸ್ಕೋ, ಯೂಗೊಸ್ಲಾವಿಯ, ಸೋವಿಯೆತ್ ಒಕ್ಕೂಟ, ಅರಬ್ ಸಂಯುಕ್ತ ಗಣರಾಜ್ಯ, ನೇಪಾಳ-ಈ ದೇಶಗಳಿಗೆ ಭೇಟಿಯಿತ್ತರು. 1966ರ ಅಕ್ಟೋಬರಿನಲ್ಲಿ ಯೂಗೋಸ್ಲಾವಿಯದ ಅಧ್ಯಕ್ಷ ಟಿಟೋ, ಅರಬ್ ಅಧ್ಯಕ್ಷ ನಾಸೆರ್, ಭಾರತದ ಪ್ರಧಾನಿ ಇಂದಿರಾ ಗಾಂಧಿ ಇವರ ಸಭೆಯೊಂದು ದೆಹಲಿಯಲ್ಲಿ ನಡೆಯಿತು. 1967ರಲ್ಲಿ ದೇಶದ ನಾಲ್ಕನೆಯ ಮಹಾ ಚುನಾವಣೆಗಳು ನಡೆದಾಗ ಗಾಂಧಿಯವರು ದೇಶಾದ್ಯಂತ ಸಂಚರಿಸಿ ತಮ್ಮ ಪಕ್ಷದ ಪ್ರಚಾರಕಾರ್ಯದಲ್ಲಿ ನಿರತರಾದರು. ಸಂಸತ್ತಿನಲ್ಲಿ ಕಾಂಗ್ರೆಸ್‍ಗೆ ಬಹುಮತ ಬಂತಾದರೂ ರಾಜ್ಯಗಳಲ್ಲಿ ಅದರ ಗಳಿಕೆ ಅಷ್ಟೇನೂ ಸಮರ್ಪಕವಾಗಿರಲಿಲ್ಲ. ಅರ್ಧದಷ್ಟು ರಾಜ್ಯಗಳಲ್ಲಿ ಕಾಂಗ್ರೆಸೇತರ ಸರ್ಕಾರಗಳು ಸ್ಥಾಪಿತವಾದುವು. ಶ್ರೀಮತಿ ಗಾಂಧಿಯವರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಮತ್ತೆ ಆಯ್ಕೆಗೊಂಡು ಮತ್ತೆ ಸರ್ಕಾರ ರಚಿಸಿದರು. ಅವರು ತಮ್ಮ ಸಂಪುಟಕ್ಕೆ ಅನುಭವಿಗಳನ್ನೂ ಯುವಕರನ್ನೂ ಆರಿಸಿಕೊಂಡರು. ಅನೇಕ ಹೊಸ ಮುಖಗಳು ಕಂಡುಬಂದುವು, ಹೊಸ ರಕ್ತ ಬಂತು.

	1967ರ ಮೇ ತಿಂಗಳಿನಲ್ಲಿ eóÁಕಿರ್ ಹುಸೇನರು ರಾಷ್ಟ್ರಪತಿಯಾಗಿಯೂ ವಿ. ವಿ. ಗಿರಿಯವರು ಉಪರಾಷ್ಟ್ರಪತಿಯಾಗಿಯೂ ಆಯ್ಕೆಯಾದರು. ಎರಡು ವರ್ಷಗಳ ಅನಂತರ (1969) eóÁಕಿರ್ ಹುಸೇನರು ನಿಧನ ಹೊಂದಿದಾಗ ಮತ್ತೆ ರಾಷ್ಟ್ರಪತಿಗಳ ಆಯ್ಕೆಯಾಗಬೇಕಾಯಿತು. ಆ ಸ್ಥಾನಕ್ಕೆ ಯಾರು ಅಭ್ಯರ್ಥಿಯಾಗಬೇಕೆಂಬ ಬಗ್ಗೆ ಕಾಂಗ್ರೆಸಿನಲ್ಲಿ ಒಡಕುಂಟಾಯಿತು. ಕಾಂಗ್ರೆಸಿನ ಹಳೆಯ ನಾಯಕರು ಎನ್. ಸಂಜೀವರೆಡ್ಡಿಯವರಿಗೆ ಬೆಂಬಲ ನೀಡಿದರು. ಗಾಂಧಿಯವರೂ ಅವರ ಬೆಂಬಲಿಗರೂ ಉಪರಾಷ್ಟ್ರಪತಿಗಳಾಗಿದ್ದ ವಿ. ವಿ. ಗಿರಿಯವರಿಗೆ ಬೆಂಬಲ ನೀಡಿದರು. ಗಿರಿಯವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಆದ ಒಡಕು ದೊಡ್ಡದಾಗಿ ಹಳೆಯ ಕಾಂಗ್ರೆಸಿಗರೂ ಇಂದಿರಾ ಗಾಂಧಿಯವರ ಪರವಾಗಿದ್ದವರೂ ಇಂಡಿಕೇಟ್-ಸಿಂಡಿಕೇಟ್ ಎಂದು ಎರಡು ಪ್ರತ್ಯೇಕ ಕಾಂಗ್ರೆಸ್‍ಗಳ ಅಡಿಯಲ್ಲಿ ಬಂದರು. ಹಳೆಯ ನಾಯಕರ ಕಾಂಗ್ರೆಸ್ಸು (ಸಂಸ್ಥಾ ಕಾಂಗ್ರೆಸ್) ಸಂಸತ್ತಿನಲ್ಲಿ ವಿರೋಧ ಪಕ್ಷವಾಯಿತು.

	1970ರ ಡಿಸೆಂಬರಿನಲ್ಲಿ ಗಾಂಧಿಯವರು ಸಂಸತ್ತನ್ನು ವಿಸರ್ಜಿಸಿ, ನಡುಗಾಲದ ಚುನಾವಣೆಯಲ್ಲಿ ತಮ್ಮ ಪಕ್ಷದ ಬಲಪರೀಕ್ಷೆ ಮಾಡಬೇಕೆಂದು ತೀರ್ಮಾನಿಸಿದರು. 1971ರಲ್ಲಿ ನಡೆದ ಚುನಾವಣೆಯಲ್ಲಿ ಗಾಂಧಿಯವರ ಪಕ್ಷಕ್ಕೆ ಪ್ರಚಂಡ ವಿಜಯ ಪ್ರಾಪ್ತವಾಯಿತು. ಕಾಂಗ್ರೆಸೇತರ ಸರ್ಕಾರಗಳಿದ್ದ ರಾಜ್ಯಗಳೂ ಕಾಂಗ್ರೆಸಿಗೆ ಬಹುಮತ ನೀಡಿದುವು. ಗಾಂಧಿಯವರು ಮತ್ತೆ ಅಧಿಕಾರಕ್ಕೆ ಬಂದರು. 

	ವಿಜಯಸಮಯದಲ್ಲೇ ಹೊಸ ಆತಂಕಗಳು ಹುಟ್ಟಿಕೊಂಡವು. ಆಗ ಪೂರ್ವ ಪಾಕಿಸ್ತಾನವೆನಿಸಿದ್ದ ಬಾಂಗ್ಲಾದೇಶದಲ್ಲಿ ಚುನಾಯಿತ ಅವಾಮಿ ಲೀಗಿನ ಸದಸ್ಯರಿಗೆ ಸರ್ಕಾರ ರಚಿಸಲು ಅವಕಾಶ ಲಭಿಸಿರಲಿಲ್ಲ. ಪಾಕಿಸ್ತಾನದ ಅಧ್ಯಕ್ಷ ಯಹ್ಯಾಖಾನ್ ಬಾಂಗ್ಲಾ ಜನರ ಮೇಲೆ ಹೊಸ ದಬ್ಬಾಳಿಕೆ ಕ್ರಮ ಕೈಗೊಂಡ. ಅನೇಕರು ಗಡಿ ದಾಟಿ ಭಾರತಕ್ಕೆ ಬಂದು ರಕ್ಷಣೆ ಪಡೆದರು. ಗಾಂಧಿಯವರು ಆ ಸಂದರ್ಭದಲ್ಲಿ ಧೈರ್ಯ ಚಾತುರ್ಯ ಸಹಾನುಭೂತಿಗಳಿಂದ ವರ್ತಿಸಿ, ನಿರಾಶ್ರಿತರಿಗಾಗಿ ನೆರವನ್ನು ಸಂಘಟಿಸಿದರು. ನಿರಾಶ್ರಿತರು ಗೌರವದಿಂದ ತಮ್ಮ ದೇಶಕ್ಕೆ ಹಿಂದಿರುಗುವಂತೆ ಮಾಡುವುದಾಗಿ ವಾಗ್ದಾನ ಮಾಡಿದರು. ಬಾಂಗ್ಲಾ ವಿಮೋಚನಾ ಹೋರಾಟಗಾರರು ಸ್ವಾತಂತ್ರ್ಯ ಘೋಷಿಸಿಕೊಂಡು ಪಾಕಿಸ್ತಾನದ ಸಶಸ್ತ್ರ ಪಡೆಯನ್ನು ಎದುರಿಸಿದರು. ಸ್ವಾತಂತ್ರ್ಯ ಯೋಧರಿಗೆ ಭಾರತ ಬೆಂಬಲ ನೀಡುತ್ತಿದ್ದುದನ್ನು ಕಂಡು ಪಾಕಿಸ್ತಾನಕ್ಕೆ ಕೋಪ ಬಂತು. ಅದು ಭಾರತದ ಮೇಲೆ ಯುದ್ಧ ಹೂಡಿತು. ಹದಿನಾಲ್ಕು ದಿನಗಳಲ್ಲಿ ಆ ಯುದ್ಧ ಮುಗಿಯಿತು. ಪೂರ್ವ ಪಶ್ಚಿಮ ರಂಗಗಳೆರಡರಲ್ಲೂ ಪಾಕಿಸ್ತಾನಕ್ಕೆ ಭಾರಿ ಪೆಟ್ಟು ಬಿತ್ತು. ಪೂರ್ವ ಭಾಗ ಸಂಪೂರ್ಣ ಸ್ವತಂತ್ರವಾಯಿತು; ಬಾಂಗ್ಲಾದೇಶದ ಉದಯದಿಂದ ಗಾಂಧಿಯವರ ವಾಗ್ದಾನ ನೆರವೇರಿದಂತಾಯಿತು. ನಿರಾಶ್ರಿತರು ಗೌರವದಿಂದ ತಮ್ಮ ದೇಶಕ್ಕೆ ಹಿಂದಿರುಗಿದರು. ವಿಶ್ವದಲ್ಲಿ ಭಾರತದ ಗೌರವ ಅಧಿಕವಾಯಿತು. ಗಾಂಧಿಯವರ ಕೀರ್ತಿಯೂ ಹೆಚ್ಚಿತು. ರಾಷ್ಟ್ರಪತಿಗಳು ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದರು (1971).

	ಇಂದಿರಾ ಗಾಂಧಿಯವರ ಪ್ರಧಾನಿತ್ವದ ಅಧಿಕಾರಕಾಲದಲ್ಲಿ ವಾದಗ್ರಸ್ತವೂ ಕ್ರಾಂತಿಕಾರಿಯೂ ಆದ ಅನೇಕ ವಿಧೇಯಕಗಳು ಜಾರಿಗೆ ಬಂದಿವೆ. ಹದಿನಾಲ್ಕು ಪ್ರಧಾನ ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದು, ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿಗಳ ಸವಲತ್ತುಗಳ ವಜ, ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣ-ಇವು ಇಂಥ ವಿಧೇಯಕಗಳಲ್ಲಿ ಮುಖ್ಯವಾದುವು. ಬಡತನವನ್ನು ನಿವಾರಿಸುವುದು ಗಾಂಧಿಯವರ ಚುನಾವಣಾ ಕಾಲದ ಘೋಷಣೆ.

	ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ದೇಶವನ್ನು ವಿಮೋಚನೆಗೊಳಿಸಿತಾದರೂ ಪಾಕಿಸ್ತಾನದೊಂದಿಗೆ ಶಾಂತಿಯುತವಾಗಿ ಬಾಳಬೇಕೆಂಬುದೇ ಇಂದಿರಾ ಗಾಂಧಿಯವರ ಆಕಾಂಕ್ಷೆ. ಇದಕ್ಕಾಗಿ ಅವರು 1972ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಅಧ್ಯಕ್ಷ eóÉಡ್. ಎ. ಭುಟ್ಟೋ ಅವರೊಂದಿಗೆ ಸಿಮ್ಲಾದಲ್ಲಿ ಸಭೆ ನಡೆಸಿದರು. ಜುಲೈ 2ರಂದು ಪರಸ್ಪರ ಅನಾಕ್ರಮಣ ಒಪ್ಪಂದವೊಂದಕ್ಕೆ ಸಹಿಯಾಯಿತು. ಕಾಶ್ಮೀರದಲ್ಲಿ ವಾಸ್ತವ ಹತೋಟಿ ರೇಖೆಯ ನಿರ್ಧಾರವಾಗಿದೆ. ಅಂತರರಾಷ್ಟ್ರೀಯ ಗಡಿಗೆ ಭಾರತ-ಪಾಕ್ ಸೇನೆಗಳು ವಾಪಸಾಗಿವೆ. ಭಾರತ-ಪಾಕಿಸ್ತಾನಗಳ ನಡುವಣ ಇತರ ಸಮಸ್ಯೆಗಳೂ ಇತ್ಯರ್ಥವಾಗಿ ಭಾರತ ಉಪಖಂಡದ ಇತಿಹಾಸದಲ್ಲಿ ಶಾಂತಿಯ ಹೊಸ ಅಧ್ಯಾಯವೊಂದು ಆರಂಭವಾಗಬೇಕೆಂದು ಇಂದಿರಾ ಗಾಂಧಿಯವರು ಶ್ರಮಿಸಿದರು. ಆದರೆ 1975ರ ಜೂನ್‍ನಲ್ಲಿ ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ಒಂದು ಕಪ್ಪು ಚುಕ್ಕೆಯಾಯಿತು. ಅಲಹಾಬಾದ್ ಹೈಕೋರ್ಟ್, ಲೋಕಸಭೆಗೆ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದೇ ಇದಕ್ಕೆ ಮೂಲಕಾರಣವಾಯಿತು. ಲೋಕನಾಯಕ ಜಯಪ್ರಕಾಶ್‍ನಾರಾಯಣ್ ಸೇರಿದಂತೆ ಅಸಂಖ್ಯ ಪ್ರತಿಪಕ್ಷ ನಾಯಕರು, ರಾಜಕೀಯ ಕಾರ್ಯಕರ್ತರನ್ನು ಜೈಲಿಗೆ ಅಟ್ಟಿದರು. ಪತ್ರಿಕಾಸ್ವಾತಂತ್ರ್ಯ ಮೊಟಕುಗೊಂಡಿತು. ಆದರೆ ಮಾರ್ಚಿ 1977ರಲ್ಲಿ ಚುನಾವಣೆ ಘೋಷಿಸಿದರು. ಅವರು ಹಾಗೂ ಅವರ ಕಾಂಗ್ರೆಸ್ ಘೋರ ಪರಾಭವ ಅನುಭವಿಸಿತು. ಪ್ರತಿಪಕ್ಷಗಳು ಒಂದಾಗಿ ಜನತಾಪಕ್ಷ ಹುಟ್ಟಿಕೊಂಡು ಅಧಿಕಾರ ಹಿಡಿಯಿತು. ಆದರೆ ಆಂತರಿಕ ಕಚ್ಚಾಟದಿಂದಾಗಿ ಮತ್ತೆ ಮಧ್ಯಂತರ ಚುನಾವಣೆ ನಡೆದು ಜನವರಿ 14, 1980, ಇಂದಿರಾಗಾಂಧಿ ಮತ್ತೆ ಪ್ರಧಾನಿಯಾದರು. ಇದಕ್ಕೂ ಮುಂಚೆ ಚಿಕ್ಕಮಗಳೂರಿನಿಂದ ಲೋಕಸಭೆಗೆ ನಡೆದ ಮರುಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ವಿರುದ್ಧ ಜಯಗಳಿಸಿ, ರಾಜಕೀಯ ಮರುಜೀವಪಡೆದರು. 1984ರ ಅಕ್ಟೋಬರ್ 31ರಂದು, ಅವರ ಅಂಗರಕ್ಷಕರೇ ಅವರನ್ನು ಬರ್ಬರ ಹತ್ಯೆಮಾಡಿದರು. ಪಂಜಾಬಿನಲ್ಲಿ ಸಿಖ್ ಭಯೋತ್ಪಾದಕತೆ ನಿಗ್ರಹಿಸುವ ಅಂಗವಾಗಿ ಸ್ವರ್ಣಮಂದಿರಕ್ಕೆ ಸೇನೆಪ್ರವೇಶ, `ಆಪರೇಷನ್ ಬ್ಲೂ ಸ್ಟಾರ್ ಅವರು ಕೈಗೊಂಡ ದುಸ್ಸಾಹಸ, ಸಿಖ್‍ಭಾವನೆಗಳನ್ನು ಕೆರಳಿಸಿತು. ಇಂದಿರಾಗಾಂಧಿ ಹತ್ಯೆ ನಂತರ ದೆಹಲಿ, ಇತರೆಡೆ ಸಂಭವಿಸಿದ ವ್ಯಾಪಕ ಸಿಖ್ ವಿರೋಧಿ ಹಿಂಸಾಚಾರ, ಸ್ವತಂತ್ರಭಾರತದ ಇತಿಹಾಸದಲ್ಲಿ ಮತ್ತೊಂದು ಕರಾಳ ಅಧ್ಯಾಯವಾಯಿಒತು.

	ಹೀಗೆ ಇಂದಿರಾಗಾಂಧಿ ಅವರ ಸೇವೆ-ಸಾಧನೆ ಅತ್ಯಂತ ವಿವಾದಾಸ್ಪದ ಹಾಗೆಯೇ ಅತಿವಿಶಿಷ್ಟ. 

	ಸಂಜಯ್‍ಗಾಂಧಿ, ರಾಜೀವ್ ಗಾಂಧಿ - ಅವರ ಇಬ್ಬರು ಪುತ್ರರು.
(ಎಸ್.ಎಂ.ಎ.) (ಕೆ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ